Friday, June 17, 2011

ಹುಡುಗನಿಗೆ ಮನೆಕೆಲಸ; ಹುಡುಗಿಯಿಂದ `ಸಹಕಾರ'

-ಶಿವರಂಜನ ಸತ್ಯಂಪೇಟೆ

`ನೀನು ಟೂರ್‌ಗೆ ಬರಲೇಬೇಕು. ಆದರೆ ಜೊತೆಯಲ್ಲಿ ನಿನ್ನ ಗಂಡನನ್ನು ಕರೆ ತರಬಾರದು~. `ನಿನ್ನ ಮಾರ್ಕ್ಸ್ ಕಾರ್ಡ್ ಬೇಕಾದರೆ ಸಂಜೆ 5 ಗಂಟೆಗೆ ಡಿಪಾರ್ಟ್‌ಮೆಂಟ್‌ಗೆ ಬಾ. ಹುಡುಗರಿದ್ದಾಗ ಭೇಟಿಯಾಗಬೇಡ. ಒಬ್ಬಳೇ ಭೇಟಿಯಾಗು~. `ನೀನು ಹಸಿರು ಬಣ್ಣದ ಚೂಡಿದಾರ್‌ನಲ್ಲಿ ತುಂಬಾ  ಸ್ಮಾರ್ಟ್ ಆಗಿ ಕಾಣಿಸ್ತಿಯಾ. ಅದನ್ನೇ ಹಾಕಿಕೊಂಡು ಬಾ~. `ನಿನ್ನ ಪಿಎಚ್‌ಡಿ ಪದವಿ ಅವಾರ್ಡ್ ಆಗಬೇಕಾದರೆ ನೀನು ಎರಡು ತೊಲ ಬಂಗಾರ ಕೊಡಲೇಬೇಕು. ಎಂಎಸ್ಸಿಯಲ್ಲಿ ಗೋಲ್ಡ್ ಮೆಡಲ್ ಪಡೆಯಬೇಕಾದರೆ ನನ್ನ ಹೆಂಡತಿ ಸೀರೆ ಒಗೆಯಬೇಕು~....

-ಇವು ಗುಲ್ಬರ್ಗ ವಿಶ್ವವಿದ್ಯಾಲಯದ ಕೆಲವು ಅಧ್ಯಾಪಕರು ಮಾರ್ಗದರ್ಶನಕ್ಕಾಗಿ ತಮ್ಮ ಬಳಿ ಬರುವ  ವಿದ್ಯಾರ್ಥಿನಿಯರ ಎದುರು ಉದುರಿಸುವ ನುಡಿಮುತ್ತುಗಳು.

`ಹುಡುಗಿಯರನ್ನು ನೋಡಿದಾಕ್ಷಣ  ಕರಗುವ, ಅವರನ್ನು ಹೇಗೆ ಒಲಿಸಿಕೊಳ್ಳಬಹುದೆಂದು ಸಂಚು ನಡೆಸುವ, ಅವರ ಪರ್ಸ್ ಜಗ್ಗುವ, ಹೆಗಲ ಮೇಲೆ ಕೈಹಾಕುವ, ಲೈಂಗಿಕವಾಗಿ ಪೀಡಿಸುವ ಬಹಳಷ್ಟು ಪ್ರಾಧ್ಯಾಪಕರನ್ನೇ ನಾವು ಹೆಚ್ಚಾಗಿ ಕಾಣಬಹುದು~ ಎಂಬುದು ಹೆಸರು ಹೇಳಲು ಭಯಪಡುವ ಸಂಶೋಧನಾ ವಿದ್ಯಾರ್ಥಿನಿಯ ಮನದಾಳದ ಅಳಲು.  

ವಿಶ್ವವಿದ್ಯಾಲಯದ ಆಡಳಿತ ನಡೆಸುವ ಮುಖ್ಯಸ್ಥರೇ ಶಟಲ್ ಕಾಕ್ ಆಡುವಾಗ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳ ಸಲುಗೆಯಿಂದ ಇದ್ದದ್ದು, ಆ ಮೇಲೆ ಅವರ ಹೆಂಡತಿಯೇ ಬಂದು ಕಪಾಳಮೋಕ್ಷ ಮಾಡಿದ್ದು, ಮನೆ ಕೆಲಸದಾಕೆಯ ಮೇಲೆಯೇ ಎರಗಿ ಬಿದ್ದದ್ದು, ಮೌಲ್ಯಮಾಪನ ಮಾಡಲು ಬಂದ ಉಪನ್ಯಾಸಕಿಯರ ಮೇಲೆ `ಕಣ್ಣಿಟ್ಟು~ ಪೀಡಿಸಿದ್ದು... ಮೊದಲಾದ ಘಟನೆಗಳು ಆಗಾಗ ಇಲ್ಲಿ ಗುಲ್ಲೆಬ್ಬಿಸುತ್ತದೆ.

ಆರಂಭದಿಂದ ಇಲ್ಲಿಯವರೆಗೆ ಇಂಥ ಸಾಕಷ್ಟು ಲೈಂಗಿಕ  ಪ್ರಕರಣಗಳು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಘಟಿಸಿವೆ. ಆದರೆ ಇವು ಯಾವುದೂ ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ.  ಅಂತೆಯೇ `ಹುಡುಗನಾದರೆ ಇದ್ದರೆ ಮನೆಗೆಲಸ ಮಾಡಬೇಕು. ಶ್ರೀಮಂತರಿದ್ದರೆ ಹಣ ಕೊಡಬೇಕು. ಹುಡುಗಿಯಾದರೆ  ಗೈಡ್‌ಗಳಿಗೆ `ಸಹಕರಿಸಬೇಕು~. ಅಂದಾಗ ಮಾತ್ರ ನಿಮ್ಮ ಸಂಶೋಧನಾ ಕಾರ್ಯ ಪೂರ್ಣಗೊಳ್ಳಲು ಸಾಧ್ಯ~- ಎಂಬ ಮಾತು ಕ್ಯಾಂಪಸ್ಸಿನಲ್ಲಿ ಕೇಳಿ ಬರುತ್ತಿವೆ.

ಯುಜಿಸಿಯ ಕಡ್ಡಾಯ ಕರಾರಿನ ಅನ್ವಯ 2009ರಿಂದ ಕಾರ್ಯಕ್ಷೇತ್ರದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಸಮಿತಿ  ರಚನೆಯಾಗಿದ್ದು, ಕಾನೂನು ಪರಿಣತರೂ ಇರುವ ಏಳು ಜನ ಸದಸ್ಯರು ಸಮಿತಿಯಲ್ಲಿದ್ದಾರೆ. `ಈವರೆಗೆ ಎರಡು ಪ್ರಕರಣಗಳು ಮಾತ್ರ ನಮ್ಮ ಸೆಲ್‌ನಲ್ಲಿ ದಾಖಲಾಗಿದ್ದು, ಸಂಬಂಧಿಸಿದವರ ಶಿಕ್ಷೆಗೆ ಕೂಡ ಶಿಫಾರಸು ಮಾಡಲಾಗಿದೆ. ಲೈಂಗಿಕ ಕಿರುಕುಳ ಎದುರಿಸುತ್ತಿರುವ ವಿದ್ಯಾರ್ಥಿನಿಯರು ಧೈರ್ಯವಾಗಿ ನಮ್ಮ ಸಮಿತಿಗೆ ದೂರು ಸಲ್ಲಿಸಬಹುದಾಗಿದೆ~ ಎಂದು ಸಮಿತಿ ಅಧ್ಯಕ್ಷೆ ಛಾಯಾ ದೇಗಾಂವಕರ್ ಹೇಳುತ್ತಾರೆ.

No comments: